Kannada Blog
ಮೆಲ್ಸರಿ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

-:ಮುನ್ನುಡಿ:-

ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡಿರುವ ನನಗೆ, ಸ್ನೇಹಿತರೆಲ್ಲ ನೀನು ಸಾಯುವುದಕ್ಕೂ ಮೊದಲು ಎಲ್ಲವನ್ನೂ ಬ್ಲಾಗ್ ಮುಖಾಂತರವಾದರೂ ಪಬ್ಲಿಷ್ ಮಾಡು ಎಂದು ಹೇಳುತ್ತಿದ್ದರು. ಕುವೆಂಪು, ಕಾರಂತರು, ಡಿ.ವಿ.ಜಿ, ಬೇಂದ್ರೆಯವರಂತಹ ಮಹಾನ್ ವ್ಯಕ್ತಿಗಳ ಬರವಣಿಗೆಗಳನ್ನು ಓದಿರುವ ನಮ್ಮ ಕನ್ನಡಿಗರಿಗೆ ನನ್ನ ಬರಹಗಳನ್ನು ಓದಲು ಕೊಡುವುದು ಮಹಾಪರಾಧ ಎಂದೇ ನನ್ನ ಭಾವನೆ. ಹೀಗಾಗಿ ಆ ಪ್ರಯತ್ನ ಮಾಡೇ ಇರಲಿಲ್ಲ.

ಆದರೂ ಒತ್ತಾಯ ಜಾಸ್ತಿಯಾದಾಗ ‘ವಾಬಿಸಾಬಿವರ್ಷಾ’ ಎನ್ನುವ ಬ್ಲಾಗ್ ಅನ್ನು ೨೦೧೮ರಲ್ಲಿ ಶುರು ಮಾಡಿ, ಎರಡು ತಿಂಗಳಿಗೇ ಕೆಲಸದ ಒತ್ತಡದಿಂದಾಗಿ ಮುಂದುವರೆಸದೇ ಬಿಟ್ಟಿದ್ದೆ.

ಈಗ ಕರೋನಾದಿಂದಾಗಿ ವರ್ಕ್ ಫ್ರಮ್ ಹೋಂ ಆಗಿರೋದರಿಂದ, ಮತ್ತೆ ಸ್ನೇಹಿತರ ಒತ್ತಾಯ ಜೋರಾಗಿದೆ. ನಾನು ಮನೆಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಸಮಯದಿಂದಾಗಿ ಹೇಳುತ್ತಿದ್ದಾರೋ ಅಥವಾ ಕೊರೋನಾದಲ್ಲೇ ನನ್ನ ಕೊನೆಯನ್ನು ಕಾಣುತ್ತಿದ್ದರೋ, ಅದಕ್ಕಾಗಿಯೇ ಈ ಪರಿ ಒತ್ತಾಯವೋ ತಿಳಿಯುತ್ತಿಲ್ಲ.

ಯಾವುದೇ ಕಾರಣವಾದರೂ, ಅವರೆಲ್ಲರ ಅಪೇಕ್ಷೆ, ಹಾರೈಕೆಯಂತೆ ನನ್ನ ಈ ಬ್ಲಾಗ್ ಪೇಜನ್ನು ರಾಜ್ಯೋತ್ಸವದ ದಿನದಂದೇ ಶುರು ಮಾಡುತ್ತಿರುವೆ. ಕೆಳಗಿದೆ ನನ್ನ ಲೇಖನ. ನಿಮಗಾದಾಗ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ…

*****

-:ನೆಚ್ಚಿನ ಮಾತು:-

ನನ್ನ ಅಜ್ಜಿಯ ಫೆವರೇಟ್ ಡೈಲಾಗ್ ಒಂದಿದೆ. ಬಹುಶಃ ನಾನು ಚಿಕ್ಕವಳಾಗಿದ್ದಾಗಿನಿಂದ ಆಕೆ ನಮ್ಮನ್ನು ಅಗಲಿ ಹೋಗುವವರೆಗೂ, ಯಾರಿಗಾದರೂ ಬುದ್ಧಿವಾದ ಹೇಳಬೇಕಾದರೆ ಈ ಮಾತನ್ನು ಆಕೆ ಹೇಳಲೇಬೇಕು. ಅಷ್ಟೊಂದು ಬಾರಿ ಅದನ್ನು ಕೇಳಿದ್ದರೂ, ನಾನು ಮೊದಲ ಬಾರಿಗೆ ಅದನ್ನು ಕೇಳಿದ್ದು ಇನ್ನೂ ಚೆನ್ನಾಗಿ ನೆನಪಿದೆ.

ಆಗ ನಾನು ಆರನೇ ತರಗತಿಯ ಪರೀಕ್ಷೆ ಮುಗಿಸಿ ಬೇಸಿಗೆಯ ರಜೆಗೆ ತಮ್ಮನೊಂದಿಗೆ ನನ್ನ ಅಜ್ಜಿಯ ಮನೆಗೆ ಹೋಗಿದ್ದೆ. ಬೇಸಿಗೆಯ ರಜೆ ಬಂತೆಂದರೆ ಅಜ್ಜಿಯ ಎಲ್ಲ ಮೊಮ್ಮಕ್ಕಳೂ ಆಕೆಯ ಮನೆಗೆ ಹೋಗಲೇಬೇಕು. ಅದು ನಮ್ಮ ಮನೆಯ ಪದ್ಧತಿಯಾಗಿತ್ತು. ಅಲ್ಲಿ ಎರಡು ತಿಂಗಳು ನಮ್ಮದೇ ಧಾಂಧಲೆ!

ಆಗೊಂದು ದಿನ ನಮ್ಮ ದೂರದ ಸಂಬಂಧಿಯೊಬ್ಬರು ಅಜ್ಜಿಯ ಮನೆಗೆ ಬಂದರು. ನಾವೆಲ್ಲ ಅವರನ್ನ ‘ಕಾಕಾ’ ಎಂದೇ ಕರೆಯುತ್ತಿದ್ದೆವು. ‘ಅಂಕಲ್’ ಇನ್ನೂ ಫೇಮಸ್ ಆಗದ ದಿನಗಳವು. 24-25 ವರ್ಷ ವಯಸ್ಸಿನ ಆತ ಬಹಳ ಪ್ರತಿಷ್ಠೆಯ ವ್ಯಕ್ತಿ. ಆಗ ನಾವು ಮಕ್ಕಳೆಲ್ಲ ಆತ ಯಾವುದೋ ಊರಿನ ಬಹಳ ದೊಡ್ಡ ಮನುಷ್ಯ ಎಂದೇ ತಿಳಿದಿದ್ದೆವು. ಆ ರೀತಿಯಿರುತ್ತಿತ್ತು ಅವರ ವೇಷ, ಠೀವಿ. ಮಾತೂ ಕೂಡ ಎಲ್ಲರೊಂದಿಗೂ ಆಡುತ್ತಿರಲಿಲ್ಲ. ಬರೀ ಅಜ್ಜ-ಅಜ್ಜಿಯರೊಂದಿಗೆ ಮಾತ್ರ. ಮಕ್ಕಳಾದ ನಮ್ಮೊಂದಿಗೆ ‘ನೀರು ಕೊಡು’, ‘ಭಕ್ರಿ ಹಾಕು’, ‘ಛಾ ಲೋಟ ತೊಗೊಂಡು ಹೋಗು’… ಹೀಗೆ ಆರ್ಡರ್ ಕೊಡುವಂತಹ ಮಾತುಗಳೇ! ಕೆಲಸದವರೊಂದಿಗಂತೂ ಮಾತಾಡಿದ್ದೇ ಇಲ್ಲ. ನಮ್ಮ ಅಜ್ಜಿಯ ಸ್ನೇಹಿತೆ ಅಂಬಕ್ಕಜ್ಜಿಗಂತೂ ಈ ನಮ್ಮ ಕಾಕಾನ ಕಂಡರೇ ಆಗುತ್ತಿರಲಿಲ್ಲ. ‘ಯಾವ ಊರಿನ ರಾಜಾ ಆದರೇನು? ನಾಕು ಮಂದಿ ಜೊತಿ ಮಾತಾಡ್ಲಿಕ್ ಬರಂಗಿಲ್ಲ ಅಂದ್ರ’ ಎಂದು ಮೂಗು ಮುರಿಯುತ್ತಿದ್ದಳು.

ಅವರು ಬಂದರೆ ಅಜ್ಜನ ಜೊತೆಗೆ ಕುರ್ಚಿ ಮೇಲೇನೆ ಕೂಡೋದು. ಫರಾಳ, ಛಾ ಎಲ್ಲ ಅಲ್ಲೇ ಆಗುತ್ತಿತ್ತು. ನಮ್ಮ ಹಾಗೆ  ಮಣಿ ಮೇಲೆ ಕೂತು ತಿಂದಿದ್ದು ನನಗೆ ನೆನಪೇ ಇಲ್ಲ.

ಈ ಸರಿ  ನಮ್ಮ ಕಾಕಾ ಬಂದಾಗ ನಮ್ಮ ಅಜ್ಜ ಊರಾಗ ಇರಲಿಲ್ಲ. ಹಿಂಗಾಗಿ ಕಾಕಾ ಅಜ್ಜನ ಕುರ್ಚಿ ಮ್ಯಾಲೆ ಕೂತು ಫರಾಳ ತಿಂದ್ರು. ನಮ್ಮದೆಲ್ಲ ಫರಾಳ ಆಗಿದ್ರಿಂದ ನಾವೆಲ್ಲ ಮಕ್ಕಳು ಆಟವಾಡಲು ಬರಬೇಕಾದ ಒಂದಿಬ್ಬರು ಸ್ನೇಹಿತರಿಗಾಗಿ ಕಾಯುತ್ತ ಮನಿ ಮುಂದಿನ ಜಗುಲಿಯಲ್ಲಿ ಕುಳಿತ್ತಿದ್ದೆವು. ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಬೈಯುವುದು ಕೇಳಿಸಿತು. ಹಿತ್ತಲಿನಿಂದ ಆ ಧ್ವನಿ ಕೇಳುತ್ತಿದ್ದರಿಂದ ನಾವೆಲ್ಲಾ ಅಲ್ಲಿಗೆ ದೌಡಾಯಿಸಿದೆವು.

ನಮ್ಮ ಕಾಕಾ ಅಲ್ಲೇ ತಲೆ ತಗ್ಗಿಸಿ ಅಳುತ್ತ ನಿಂತಿದ್ದ ಚೆನ್ನವಂಗ ಬೈತಿದ್ದ. ಚೆನ್ನವ್ವ ಮೂವತ್ತರ ಆಸು ಪಾಸಿನ ಹೆಂಗಸು. ದಿನಾ ಬೆಳಿಗ್ಗೆ ಮತ್ತು ಸಾಯಂಕಾಲ ಬಂದು ದನದ ಕೊಟ್ಟಿಗಿ ಕ್ಲೀನ್ ಮಾಡಿ, ಸಗಣಿಯನ್ನೆಲ್ಲ ಕುಳ್ಳು ಬಡಿದು ಹೋಗುತ್ತಿದ್ದಳು. ಈಗ ಕುಳ್ಳು ಬಡಿಯಲಿಕ್ಕೆ ಸಗಣಿಯನ್ನೆಲ್ಲ ಬುಟ್ಟಿಯಲ್ಲಿ ತೊಗೊಂಡು ಬರುವಾಗ ಕಾಕಾನಿಗೆ ಡಿಕ್ಕಿ ಹೊಡೆದದ್ದರಿಂದ ಅವರ ಬಿಳಿ ಶರ್ಟಿನ ಮೇಲೆ ಸಗಣಿ ಬಿದ್ದಿತ್ತು. ಅಜ್ಜಿ ಭಕ್ಕರಿ ಬಡಿಯೋದು ಬಿಟ್ಟು, ಅಲ್ಲಿಗೆ ಬರೋ ತನಕ ಅವರ ಬೈಗುಳ ನಡೆದಿತ್ತು. ‘ಯಾವ ಹುಸ್ಸೂಳೆ ಮಗಳಿದ್ದೀ? ಕಣ್ ಏನ್ ನೆತ್ತಿ ಮ್ಯಾಲ ಅವ ಏನು? ನಾ ಬರೋದು ಕಾಣಿಸಿಲ್ಲ ರಂಡಿ ತಂದು… ನಿಂದ್ ಏನ್ ಕೆಲಸ? ಕೊಟಗಿ ಸಗಣಿ ಬಳಿಯೋದು. ಅದನ್ನ ತೊಗೊಂಡು ಬಚ್ಚಲದ ಕಡಿ ಯಾಕ ಬಂದಿ? ನಿನ್ನ ಒಂದ್ ವರ್ಷದ ಪಗಾರದ ಕಿಮ್ಮತ್ತಿನ ಶರ್ಟ್ ಮ್ಯಾಲ ಸಗಣಿ ಬೀಳಿಸಿಯೆಲ್ಲ ನಿಂಗೇನು ಹೇಳ್ಬೇಕು?….’

ಆಗ ಅಲ್ಲಿಗೆ ಬಂದ ನಮ್ಮ ಅಜ್ಜಿಯನ್ನು ಕಂಡು ಚೆನ್ನವ್ವ ಜೋರಾಗಿ ಅಳತೊಡಗಿದಳು. ನಮ್ಮ ಕಾಕಾ ‘ಮಾಡೋದು ಮಾಡಿ ಯಾಕ ಅಳ್ತಿ ಹುಚ್ ಭೋಸಡಿ ತಂದು…’  ಎಂದು ಇನ್ನೂ ಜೋರಾಗಿ ಬೈಯಲಾರಂಭಿಸಿದ. ನನ್ನ ಅಜ್ಜಿ, ‘ ಚೆನ್ನವ್ವ ಸುಮ್ನಾಗು ಯಾಕ್ ಅಳ್ತಿ… ಆದದ್ದಾದರೂ ಏನೋ ಮಾರಾಯ’ ಎಂದು ಕಾಕಾನನ್ನು ಕೇಳುತ್ತಲೇ ಅವರ ಶರ್ಟ್ ನೋಡಿ, ‘ಅಯ್ಯ ಶರ್ಟ್ ಎಲ್ಲ ಶಗಣಿ ಆಗ್ಯದಲ್ಲೊ’ ಎನ್ನುವಾಗ, ನಮ್ಮ ಕಾಕಾ ‘ಈ ಭೋಸುಡಿನ ಮಾಡಿದ್ದು….’ ಎಂದು ಮತ್ತೆ ಶುರುಮಾಡುವಾಗ, ಅಜ್ಜಿ ಅವನನ್ನು ತಡೆದು, ‘ನಿನ್ನ ಶರ್ಟ್ ತಕ್ಕೊಡು. ಚೆನ್ನವ್ವ ತಗೋ ಹೋಗಿ ಸ್ವಚ್ಛ ಒಕ್ಕೊಂಡು ಬಾ. ಅಲ್ಲೇ ಬಚ್ಚಲದಾಗ ಸೋಪು ಅದ ನೋಡು’ ಎಂದವಳನ್ನು ಕಳಿಸಿದಳು.

ಕಾಕಾನ ಕಡೆ ತಿರುಗಿ, ‘ಈಗ ಒಗದ್ರ ನಿನ್ ಶರ್ಟ್ ಗೆ ಹತ್ತಿದ ಕಲೆ ಹೋಗ್ತದ. ಅಷ್ಟು ಹೊಲಸು ಮಾತಾಡಿ ಇಷ್ಟೂ ಮಂದಿ ಮನಸ್ಸಿಗೆ ಕರೆ ಹಚ್ಚಿದ್ಯಲ್ಲಾ ಅದು ಹೋಗ್ತದ ಅಂತ ಮಾಡಿಯೇನು? ಸುಮ್ನ ಬಾಯಾದ, ದುಡ್ಡದ ಅಂತ ಮಾತಾಡಬಾರದೋ ಬಾಳ್ಯಾ. ನಿಂದ್ ಬ್ಯಾರೆ ಶರ್ಟ್ ಹಾಕ್ಕೋ ಹೋಗು ಮತ್ತ ರೈಲಿಗೆ ಹೊತ್ತಾದೀತು’ ಎಂದಳು. ನಮ್ಮ ಕಾಕಾ ತಲೆ ತಗ್ಗಿಸಿ ಹೊರಟಾಗ, ಅಜ್ಜಿ ಮತ್ತೆ, ‘ಇಷ್ಟೆಲ್ಲಾ ಅಂದ್ಯಲ್ಲಾ, ಏನ್ ಗಳಿಸ್ದಿ, ಏನ್ ಉಳಿಸ್ದಿ, ಏನ್ ಬೆಳಿಸ್ದಿ ಅಂತ ಚೂರು ವಿಚಾರ ಮಾಡು’ ಅನ್ನುತ್ತಾ ನಮ್ಮನ್ನೆಲ್ಲಾ ನೋಡಿ, ‘ಯಾಕ ಇವತ್ತ ಆಟಾ ಆಡಂಗಿಲ್ಲೇನು?’ ಎನ್ನುತ್ತಾ ಅಡುಗೆ ಮನೆಯ ಕಡೆ ನಡೆದಳು.

ರಾತ್ರಿ ಅಜ್ಜ ಊರಿಗೆ ಬಂದ ಮೇಲೆ, ಅವರು ಊಟ ಮಾಡುವಾಗ, ಅಜ್ಜನ ಮುಂದೆ ಬೆಳಿಗ್ಗೆಯಾದ ರಾದ್ಧಾಂತದ ಬಗ್ಗೆ ನಾವೆಲ್ಲಾ ಮೊಮ್ಮಕ್ಕಳೂ ನಮ್ಮ ನಮ್ಮ ವರ್ಷನ್ ಹೇಳಲು ಶುರು ಮಾಡಿದೆವು. ನನಗೆ ಅಜ್ಜಿಯ ಮಾತು ನೆನಪಾಗಿ ‘ಏನ್ ಗಳಿಸ್ದಿ, ಏನ್ ಉಳಿಸ್ದಿ ಮತ್ತೇನೋ ಅಂದ್ಯಲ್ಲಾ ಅಜ್ಜಿ’ ಎನ್ನುತ್ತಲೇ, ಅಜ್ಜ ‘ಏನ್ ಬೆಳಿಸ್ದಿ’ ಎಂದರು. ನನ್ನ ತಮ್ಮ ‘ಹಂಗಂದ್ರ?’ ಎಂದ. ಅಜ್ಜ ಅವಾಗ ‘ನಾವು ಏನ್ ಕೆಲಸ ಮಾಡಿದ್ರೂ ಅದು ವಿಶ್ವಾಸ ಗಳಿಸ್ಬೇಕು, ಸಂಬಂಧ ಉಳ್ಸಬೇಕು ಮತ್ತ ಪ್ರೀತಿ ಬೆಳ್ಸಬೇಕು’ ಎಂದರು.

ಆ ಮಾತಿನ ಅರ್ಥ ತಿಳಿದಾಗಿನಿಂದ ಅದು ನನ್ನ ನೆಚ್ಚಿನ ಮಾತು ಕೂಡ!

4 thoughts on “ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು”

  1. ಮೆಡಮ್, ಈ ನಿಮ್ಮ ಕಥೆ ಓದುತ್ತಾ ಹೋದ ಹಾಗೆ. ನನಗೆ ಒಮ್ಮಿಂದೊಮ್ಮೆಲೆ ನನ್ನ ಬಾಲ್ಯದ ನೆನಪುಗಳು ಮರುಕಳಿಸದಂತೆ ಭಾಸವಾಯಿತು. ಅದನ್ನು ಬಿಟ್ಟುಬಿಡದೇ ಅದರ ಬೆನ್ನಲ್ಲೇ ಮುಂದುವರೆದೆ, ಆಗ ನನಗೆ ನಿಮ್ಮ ಕತೆಯಲ್ಲಿ ಬರುವ ಒಂದು ಪಾತ್ರವಾದ ಅನುಭವವಾಯ್ತು. ಈ ನಿಮ್ಮ ಹಳೆಯ ನೆನಪುಗಳ ಮದ್ಯ ಒಂದು ತರದ ಅಗಾಧತೆ ಇದೆ. ಹಿರಿಯ ತಲೆಮಾರಿನ ಪರಂಪರೆಯನ್ನು ಇಂದಿನ ಕಿರಿಯ ತಲಮಾರಿನವರಿಗೆ ಗುರುತಿಸಿ ಸೂಚಿಸಬಹುದಾದಂತಹ ಅನೇಕ ರೀತಿಯ ಪುರಾವೆಗಳು ಪಳಯುಳಿಕೆಗಳು ಈ ಕತೆಯಲ್ಲಿ.ಅಡಗಿರಲಿಕ್ಕೂ ಸಾಧ್ಯತೆಗಳಿವೆ ಎಂಬುದು. ತಲೆಮಾರುಗಳ ಮನೆತನ, ಹಿರಿತನ, ಸಿರಿತನ, ಮುದಿತನ ಮತ್ತು ಅವರ ಒಟ್ಟಾರೆ ಸಾಂಸ್ಕೃತಿಕ ಸಾಂಪ್ರದಾಯಿಕ ಬದುಕು ಬವನೆಗಳು ಎಂದಿಗೂ ಪ್ರಸ್ತುತವಾಗಿಯೇ ಇರುತ್ತವೆ ಎಂಬುದಕ್ಕೆ ಈ ನಿಮ್ಮ ಕತೆ ಹೂರಣದಲ್ಲಿ ಅನೇಕ ಸಾಕ್ಷಿಗಳನ್ನು ಕಾಣಬಹುದಾಗಿದೆ ಮತ್ತು ಗುರುತಿಸಲೂ ಬಹುದಾಗಿದೆ.

    1. ಮಹಾಂತೇಶ್ ಸರ್,
      ತಮ್ಮ ಅನಿಸಿಕೆಯನ್ನು ಸವಿಸ್ತಾರವಾಗಿ ಹಂಚಿಕೊಡದಿದ್ದಕ್ಕೆ ತುಂಬಾ ಧನ್ಯವಾದಗಳು

  2. Its really nice. I recollected my childhood memories and your north karnataka kannada writing skill is mind blowing. At the end ‘ನಾವು ಏನ್ ಕೆಲಸ ಮಾಡಿದ್ರೂ ಅದು ವಿಶ್ವಾಸ ಗಳಿಸ್ಬೇಕು, ಸಂಬಂಧ ಉಳ್ಸಬೇಕು ಮತ್ತ ಪ್ರೀತಿ ಬೆಳ್ಸಬೇಕು’ ಎಂದರು. its true inspiration to everyone. Please continue your blog. Its so nice to read in kannada. Today we all speak in English, write English and hardly there are people like you still write the blogs in kannada and speak in kannada.

Leave a Reply

Your email address will not be published. Required fields are marked *