ನಮ್ಮ ಬೇಸಿಗೆಯ ರಜಾದಿನಗಳನ್ನು ಯಾವಾಗಲೂ ನಮ್ಮ ಅಜ್ಜಿಯ ಮನೆಯಲ್ಲೇ ಕಳೆಯುತ್ತಿದ್ದೆ. ಈಗಿರುವಂತೆ ಆಗ ಸಮ್ಮರ್ ಕ್ಯಾಂಪ್ ಗಳು ಇರಲಿಲ್ಲ. ಹೀಗಾಗಿ ಬೇಸಿಗೆ ಶುರುವಾಯಿತೆಂದರೆ ನಮ್ಮ ಕ್ಯಾಂಪ್ ಯಾವಾಗಲೂ ಅಜ್ಜಿಯ ಮನೆಯಲ್ಲೇ!
ವಾರ್ಷಿಕ ಪರೀಕ್ಷೆಗೆ ತಯಾರಾಗುವುದಕ್ಕಿಂತ, ಅದಾಗುತ್ತಿದಂತೆಯೇ ಅಜ್ಜಿಯ ಮನೆಗೆ ಹೋಗುವ ತಯಾರಿ ಜೋರಾಗಿರುತ್ತಿತ್ತು. ನನ್ನಮ್ಮ ಮಾಡುವ ಮಾವಿನ ಮಿಡಿಯ ಉಪ್ಪಿನಕಾಯಿ ನಮ್ಮಜ್ಜನಿಗೆ ಬಹಳ ಪ್ರೀತಿ. ಹೀಗಾಗಿ ಫೆಬ್ರವರಿ ಬರುತ್ತಿದ್ದಂತೆಯೇ ಉಪ್ಪಿನಕಾಯಿ ಭರಣಿಗಳನ್ನು ಅಟ್ಟದಿಂದ ಕೆಳಗಿಳಿಸಿ, ಅವನ್ನು ಸ್ವಚ್ಛವಾಗಿ ತೊಳೆದು, ಬಿಸಿಲಲ್ಲಿ ಒಣಗಿಸಿ ಉಪ್ಪಿನಕಾಯಿ ಹಾಕಲು ನನ್ನ ಅಮ್ಮ ತಯಾರಿ ನಡೆಸುತ್ತಿದ್ದಳು. ಭರಣಿಗಳು ಕೆಳಗಿಳಿದಿವೆಯೆಂದರೆ, ನಮಗೆ ಅಜ್ಜಿಯ ಮನೆಗೆ ಇನ್ನು ಕೆಲವೇ ವಾರಗಳಲ್ಲಿ ಹೋಗುವುದು ನಿಶ್ಚಯವೆಂದು ಅರ್ಥವಾಗಿ, ಪರೀಕ್ಷೆಯ ಟೆನ್ಶನ್ ಗಿಂತಲೂ, ಊರಿಗೆ ಹೋಗುವ ಸಂಭ್ರಮ ಹೆಚ್ಚಾಗಿರುತ್ತಿತ್ತು. ಮನೆ ತುಂಬಾ ಉತ್ಸಾಹದ ವಾತಾವರಣ.
ಪರೀಕ್ಷೆಗೆ ಹೇಗೆ ಓದುತ್ತಿದ್ದೆನೋ? ಏನು ಬರೆಯುತ್ತಿದ್ದೆನೋ? ಚಿಕ್ಕವಳಿದ್ದಾಗ ಎಲ್ಲಾ ಪರೀಕ್ಷೆಗಳಲ್ಲಿ ಪಾಸಾಗಿದ್ದಾದರೂ ಹೇಗೆ ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿರುತ್ತದೆ.
ಪರೀಕ್ಷೆ ಯಾವ ದಿನವಾದರೂ ಮುಗಿಯಲಿ ಆ ವಾರಾಂತ್ಯದ ಬರುವ ಭಾನುವಾರವೇ ನಮ್ಮ ಪಯಣ ಅಜ್ಜಿಯ ಮನೆಗೆ ಶುರುವಾಗುತ್ತಿತ್ತು ಏಕೆಂದರೆ ಭಾನುವಾರ ಮಾತ್ರ ತಂದೆಯವರಿಗೆ ರಜೆಯಿರುತ್ತಿತ್ತು. ಅವರು ನಮ್ಮನ್ನು ರೈಲ್ವೆ ಸ್ಟೇಷನ್ ಗೆ ಕರೆ ತಂದು ನಮ್ಮನ್ನೆಲ್ಲ ರೈಲಿನಲ್ಲಿ ಕೂಡಿಸಿ, ತಿನ್ನಲು ಹಣ್ಣುಗಳನ್ನು ಮತ್ತು ರಜೆಯಲ್ಲಿ ಓದಲು ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಯಾರಾದರೂ ಅಜ್ಜಿಯ ಊರಿನವರು ನಾವು ಪ್ರಯಾಣಿಸುವ ಭಾನುವಾರ ಊರಿಗೆ ಹೋಗುತ್ತಿದ್ದರೆ ನಾವುಗಳು ಅವರುಗಳ ಜೊತೆಯಲ್ಲಿ ಹೋಗುತ್ತಿದ್ದೆವು. ಅವರೆಲ್ಲರೂ ನಮಗೆ ಮಾಮ, ಕಾಕಾ, ಮಾಮಿ, ಕಾಕು ಆಗಿರುತ್ತಿದ್ದರು. ಅವರುಗಳೂ ನಮ್ಮನ್ನು ಖುಷಿಯಾಗಿ ಕರೆದೊಯ್ಯುತ್ತಿದ್ದರು. ಅಜ್ಜಿಯ ಮನೆಗೆ ನಮ್ಮನ್ನು ಮುಟ್ಟಿಸಿ ಆಕೆ ಕೊಡುವ ಅವಲಕ್ಕಿ ತಿಂದು, ಚಹಾ ಕುಡಿದೇ ತಮ್ಮ ಮನೆಗೆ ಹೋಗುತ್ತಿದ್ದರು. ಕೆಲವೊಮ್ಮೆ ಅಜ್ಜಿಯ ಮನೆಯಿಂದ ಬಹಳ ದೂರದಲ್ಲಿರುವವರೂ ಕೂಡ ನಮ್ಮನ್ನು ಅಜ್ಜಿಯ ಮನೆಗೆ ತಲುಪಿಸುತ್ತಿದ್ದರು. ಯಾರೂ ಅದನ್ನು ಕಷ್ಟವೆಂದೋ ಅಥವಾ ನಮಗೆ ಹೊಡೆಯುವುದೋ, ಬಯ್ಯುವುದೋ ಮಾಡುತ್ತಿರಲಿಲ್ಲ. ಬಹಳ ಆತ್ಮೀಯತೆಯಿಂದ ಇರುತ್ತಿದ್ದರು.
ಯಾವ ಮಾಮ, ಮಾಮಿ, ಕಾಕಾ, ಕಾಕು ಊರಿಗೆ ಹೋಗುತ್ತಿಲ್ಲವಾದರೆ ಅಮ್ಮ ನಮ್ಮೊಡನೆ ಬಂದು ಒಂದು ವಾರವಿದ್ದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಳು. ಶಾಲೆ ಪುನಃ ಆರಂಭವಾಗಲು ಒಂದು ವಾರವಿದೆಯೆಂದಾಗ ತಂದೆಯವರೂ ಮತ್ತು ಅಮ್ಮ ಇಬ್ಬರೂ ಊರಿಗೆ ಬರುತ್ತಿದ್ದರು. ಅವರೊಂದಿಗೆ ನಾವುಗಳೂ ವಾಪಸ್ಸಾಗುತ್ತಿದ್ದೆವು. ಇದು ನಾನು ಕಾಲೇಜ್ ಮೆಟ್ಟಿಲು ಹತ್ತುವ ತನಕ ಪ್ರತಿ ವರ್ಷ ಚಾಚೂ ತಪ್ಪದೆ ನಡೆಯುತ್ತಿದ್ದ ಪದ್ಧತಿ.
ಅಜ್ಜಿಯ ಮನೆಯಲ್ಲಿ ಕಳೆದ ಯಾವ ಕ್ಷಣಗಳನ್ನೂ ಮರೆಯಲು ಸಾಧ್ಯವಿಲ್ಲ. ಆಕೆಯ ರುಚಿ ರುಚಿಯಾದ ಬಗೆಬಗೆಯ ಪಕ್ವಾನ್ನಗಳು ಅಂತಃಕರಣ ತುಂಬಿದ ಮಾತುಗಳು, ಪ್ರೀತಿ ತುಂಬಿದ ಹುಸಿ ಕೋಪದ ಬಯ್ಗುಳಗಳು, ಅಜ್ಜನ ರಸವತ್ತಾದ ಕಥೆಗಳು, ಊರಿನ ಸಂತೆಗಳು, ಟೆಂಟಿನ ಸಿನಿಮಾಗಳು… ಅವೆಲ್ಲಕ್ಕಿಂತ ಹೆಚ್ಚಾಗಿ ಅಜ್ಜಿಯ ಮೆತ್ತನೆಯ ಕೌದಿಗಳು ಮತ್ತವಳ ಬೆಚ್ಚನೆಯ ತೆಕ್ಕೆಗಳು. ಈಗಲೂ ನೆನಪಾದಾಗ, ಅವೆಲ್ಲ ಸಿಕ್ಕ ನಾವೆಷ್ಟು ಧನ್ಯರು ಎನಿಸುತ್ತದೆ.